Tuesday, 1 November 2022

ಕಾರ್ತೀಕ ಮಾಸದ ಮಹಾತ್ಮೆ

 ಕಾರ್ತೀಕ ಮಾಸದ ಮಹಾತ್ಮೆ


ಕಾರ್ತೀಕ ಮಾಸವು ಆರಂಭವಾಗಿ ಎಂಟು ದಿನಗಳೆ ಕಳೆದಿವೆಯಾದರೂ ಈ ಮಾಸದ ವಿಶೇಷತೆಯನ್ನು ಸಜ್ಜನರೊಂದಿಗೆ ಹಂಚಿಕೊಳ್ಳೋಣವೆಂದೆನಿಸಿ ತಿಳಿದಿರುವಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಕಾರ್ತೀಕವು ನಮ್ಮ ಹಿಂದೂ ಪಂಚಾಂಗದಲ್ಲಿ ಎಂಟನೇ ಮಾಸವಾಗಿದ್ದು, ಸಾಮಾನ್ಯವಾಗಿ ಪ್ರತಿವರ್ಷ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಬರುತ್ತದೆ. ಕಾರ್ತೀಕ ಮಾಸ ಆರಂಭವಾದೊಡನೆ ಮೈಕೊರೆಯುವ ಛಳಿಗಾಲವೂ ಆರಂಭಗೊಳ್ಳುತ್ತದೆ.

ಕೃತ್ತಿಕಾ ನಕ್ಷತ್ರಸಮೂಹದ ಅತ್ಯಂತ ಸನಿಹದಲ್ಲಿ ಚಂದ್ರನಿರುವುದರಿಂದ ಕಾರ್ತೀಕಮಾಸವೆಂದು ಈ ಮಾಸವನ್ನು ಕರೆಯಲಾಗುತ್ತದೆ.

ಕಾರ್ತೀಕಮಾಸವನ್ನು ಕೌಮುದಿ ಮಾಸವೆಂದೂ ಕರೆಯಲಾಗುತ್ತದೆ. ಏಕೆಂದರೆ ಈ ತಿಂಗಳು ಪೂರ್ತಿ ಚಂದ್ರನು ಪ್ರಖರವಾಗಿ ಕಾಣಿಸಿಕೊಳ್ಳುತ್ತಾನೆ.

ಕಾರ್ತೀಕಮಾಸವು ಹರಿಹರರಿಬ್ಬರನ್ನು ಪೂಜಿಸಲು, ಅರ್ಚಿಸಲು, ಪ್ರಾರ್ಥಿಸಲು ಅತ್ಯಂತ ವಿಶೇಷವಾದ ಮಾಸವೆಂದು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಚಾತುರ್ಮಾಸಗಳಲ್ಲಿ ಕಾರ್ತೀಕ ಮಾಸವು ಅತ್ಯಂತ ಪುಣ್ಣ್ಯತಮವಾದ ಮಾಸವೆನ್ನಲಾಗುವುದು.

ಕಾರ್ತೀಕಮಾಸದಲ್ಲಿ ಸಂಗಮಸ್ನಾನಕ್ಕೆ ವಿಶೇಷ ಮಹತ್ವವಿದೆ. ಏಕೆಂದರೆ, ಈ ಮಾಸದಲ್ಲಿ ಪರಮ ಪವಿತ್ರ ಗಂಗಾನದಿಯು ಎಲ್ಲ ನದಿ, ಸ್ಥಾವರ, ಕೆರೆ, ಕೊಳ್ಳಗಳಿಗೂ ಗುಪ್ತಗಾಮಿನಿಯಾಗಿ ಹರಿದು ಎಲ್ಲ ನೀರನ್ನೂ ಪವಿತ್ರಗೊಳಿಸುತ್ತಾಳೆ.

ಈ ಕೆಳಗಿನ ಕೆಲವು ಕಾರ್ಯಗಳು ಹೆಚ್ಚು ಪುಣ್ಯಕರವೆಂದು ಶಾಸ್ತ್ರಗಳು ನಿಷ್ಕರಿಸಿವೆ:

v  ಅರುಣೋದಯಕೆ ಮುನ್ನ, ವಿಶೇಷವಾಗಿ ಬ್ರಾಹ್ಮೀ ಮುಹೂರ್ತದಲ್ಲಿ, ಅಂದರೆ ಸೂರ್ಯೂದಯಕ್ಕೆ ಮುಂಚಿತವಾಗಿ, ಆಕಾಶದಲ್ಲಿ ನಕ್ಷತ್ರಗಳು ಇನ್ನೂ ಗೋಚರಿಸುತ್ತಿರುವಾಗಲೇ ಪವಿತ್ರನದಿಯಲ್ಲಿ ಸ್ನಾನ ಮಾಡಬೇಕು.

v  ಮಾಸಪೂರ್ತಿ ಮನೆಯಲ್ಲಿ, ತುಳಸಿಯ ಮುಂದೆ, ಹೆಬ್ಬಾಗಿಲಿನಲ್ಲಿ, ದೇವರ ಮನೆ ಮತ್ತು ಅದರ ದ್ವಾರದಲ್ಲಿ ದೀಪವನ್ನು ಹಚ್ಚಿಡಬೇಕು. ಇದನ್ನು ದೀಪಾರಾಧನೆಯೆನ್ನಲಾಗುತ್ತದೆ.

v  ಉಪವಾಸವೂ ಈ ಮಾಸದಲ್ಲಿ ಹೆಚ್ಚು ಪುಣ್ಯಕರ.

v  ವಿಷ್ಣುವಿನ ದೇವಸ್ಥಾನಗಳಿಗಾಗಲೀ, ಶಿವಾರಾಧಕರು ಪರಶಿವನ ದೇವಸ್ಥಾನಗಳಿಗಾಗಲೀ ಭೇಟಿಯಿತ್ತು ಮನಸಾ ಪ್ರಾರ್ಥನೆಗಳನ್ನು ಸಲ್ಲಿಸಬೇಕು. ವಿಶೇಷವಾಗಿ ಬ್ರಾಹ್ಮೀಮುಹೂರ್ತದಲ್ಲಿ ದೇವಸ್ಥಾನ ಸಂದರ್ಶನ, ದೇವರ ದರ್ಶನ ಮಾಡುವುದು ಒಳಿತು.

v  ಸಜ್ಜನರಿಗೆ, ಉತ್ತಮರಿಗೆ ದೀಪಗಳನ್ನು ದಾನಮಾಡುವುದು ವಿಶೇಷ

v  ಸಾಲಿಗ್ರಾಮ ಪೂಜೆ

v  ವನಭೋಜನ.

ಸೌರಮಾನ ರೀತ್ಯಾ ಕಾರ್ತೀಕಸ್ನಾನವು ಅಶ್ವಯುಜ (ಶುಕ್ಲ ಪಕ್ಷ) ಪೌರ್ಣಮಿಯಿಂದಾರಂಭಿಸಿ ಕಾರ್ತೀಕ ಪೌರ್ಣಮಿಯವರಿಗೂ, ಒಂದು ತಿಂಗಳ ಕಾಲ ಮಾಡುವುದು ಸಂಪ್ರದಾಯ. ಆದರೆ, ಚಾಂದ್ರಮಾನರೀತ್ಯಾ ಕಾರ್ತೀಕ ಶುಕ್ಲ ಪಾಡ್ಯದಿಂದ ಆರಂಭಿಸಿ ಕಾರ್ತೀಕ ಕೃಷ್ಣ ಅಮಾವಾಸ್ಯೆಯವರೆಗೂ ಕಾರ್ತೀಕ ಸ್ನಾನವನ್ನು ಮಾಡುವುದು ವಿಶೇಷವೆನ್ನಲಾಗಿದೆ.

ಕಾರ್ತೀಕ ಪೌರ್ಣಿಮೆಯಂದು ಜನರು, ವಿಶೇಷವಾಗಿ ಸ್ತ್ರೀಯರು, ಸೂರ್ಯಾಸ್ತಾನಂತರ ನದಿಗಳಲ್ಲಿ ಹಣತೆದೀಪಗಳನ್ನು ತೇಲಿಬಿಡುತ್ತಾರೆ. ಹಿಂದೂ ಸಂಸ್ಕೃತಿಯಲ್ಲಿ ನದಿನದಗಳು ದೇವತೆಗಳು.

ತಮಿಳುನಾಡಿನ ತಿರುಚಾನೂರಿನಲ್ಲಿ ಪ್ರತಿವರ್ಷ ಕಾರ್ತೀಕಮಾಸದಲ್ಲಿ ಶ್ರೀ ಪದ್ಮಾವತೀ ದೇವಿಯ ಕಾರ್ತೀಕ ಬ್ರಹ್ಮೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.  

ಶ್ರೀ ಪದ್ಮಪುರಾಣದಲ್ಲಿ ಕಾರ್ತೀಕಮಾಸದ ಮತ್ತೊಂದು ವೈಶಿಷ್ಟ್ಯವನ್ನು ವಿವರಿಸಿದ್ದಾರೆ. ಭೃಗು ಮಹರ್ಷಿಗಳು ಕಾಲಿನಿಂದ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಕಾಲಿನಿಂದ ಒದ್ದಾಗ ಪರಮಾತ್ಮನು ಆ ಋಷಿಯ ಮೇಲೆ ಒಂದಿನಿತೂ ಕೋಪಗೊಳ್ಳದೆ ಆ ಋಷಿಯನ್ನೇ ಸಂತೈಸಿ, ಓಲೈಸುವುದನ್ನು ಸಹಿಸದಾದ ಮಹಾಲಕ್ಷ್ಮಿಯು ಕೋಪದಿಂದ ಪರಮಾತ್ಮನನ್ನು ತೊರೆದು ಭೂಲೋಕಕ್ಕೆ ಬಂದುಬಿಡುವಳು. ಆದರೆ ಭೃಗುಮಹರ್ಷಿಗಳು ಶ್ರೀ ವಿಷ್ಣುವನ್ನು ಹಾಗೆ ಒದೆಯಲು ಎರಡು ಕಾರಣಗಳಿರುತ್ತವೆ. ಬ್ರಹ್ಮ, ರುದ್ರ, ವಿಷ್ಣು ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರೆಂಬುದನ್ನು ಅರಿಯುವ ನೆಪದಿಂದ ಈ ಕಪಟನಾಟಕ ಆರಂಭವಾಗುತ್ತದೆ. ಭೃಗುಮುನಿಗಳು ಬ್ರಹ್ಮದೇವರ ಮಾನಸ ಪುತ್ರರು ಹಾಗೂ ಸಪ್ತರ್ಷಿಗಳಲ್ಲಿ ಒಬ್ಬರು. ಅವರಲ್ಲಿ ಅಹಂಕಾರ, ಕೋಪಗಳಿರುತ್ತವೆ ಮತ್ತುಅವು ಮೂರನೇ ಕಣ್ಣಿನ ರೂಪದಲ್ಲಿ ಭೃಗುಮುನಿಗಳ ಬಲ ಉಂಗುಷ್ಠದಲ್ಲಿರುತ್ತದೆ. ಅದರ ಪರಿಣಾಮವೇ ಅವರು ತ್ರಿಮೂರ್ತಿಗಳನ್ನು ಪರೀಕ್ಷಿಸುವ, ವಿಷ್ಣುವನ್ನು ಒದೆಯುವ ದುಃಸಾಹಸಕ್ಕೆ ಕೈಹಾಗುತ್ತಾರೆ. ಅಲ್ಲದೇ, ವಿಷ್ಣುವು ಭೂಲೋಕದಲ್ಲಿ ಅವತಾರಮಾಡಲು ಭೃಗುಋಷಿಯ ಶಾಪವೂ ಒಂದು ನೆಪವಾಗಬೇಕಾಗುತ್ತದೆ. ನಂತರ, ಮಹಾಲಕ್ಷ್ಮಿಯು ವೈಕುಂಠವನ್ನು ತೊರೆದು ಕೊಲ್ಲಾಪುರದಲ್ಲಿ ನೆಲೆಸುವಳು. ವಿಷ್ಣುವು ಆಕೆಯ ವಿರಹವನ್ನು ತಡೆಯಲಾರದೆ, ಅದಾಗಲೇ ವಿವಾಹವಾಗಿದ್ದ ಪದ್ಮಾವತಿಯನ್ನು ತೊರೆದು ಮಹಾಲಕ್ಷ್ಮಿಯನ್ನು ಅರಸುತ್ತಾ ಕೊಲ್ಲೂರಿನೆಡೆಗೆ ಸಾಗುತ್ತಾನೆ. ಈ ವಿಷಯವು ಮಹಾಲಕ್ಷ್ಮಿಯ ಅರಿವಿಗೆ ಬಂದು ಆಕೆ ಕಪಿಲ ಮಹರ್ಷಿಗಳ ಆಶ್ರಮದಲ್ಲಿ ಆಶ್ರಯ ಪಡೆಯುತ್ತಾಳೆ. ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿಯನ್ನು ಕಾಣದ ಭಗವಂತ ಕಾಡುಮೇಡುಗಳನ್ನು ಅಲೆಯಲಾರಂಭಿಸುತ್ತಾನೆ. ಪುನಃ ಕೊಲ್ಲಾಪುರಕ್ಕೆ ಮಹಾವಿಷ್ಣುವು ಬಂದು ಸೇರುತ್ತಾನೆ. ಅಲ್ಲಿ, ಪೂರ್ವಕಾಲದಲ್ಲಿ ಅಗಸ್ತ್ಯಋಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟು ಅರ್ಚಿಸಲ್ಪಟ್ಟ ಮಹಾಲಕ್ಷ್ಮಿಯ ಸುಂದರ ಮೂರ್ತಿಯನ್ನು ಕಂಡು ಮಹಾವಿಷ್ಣುವು ತನ್ನ ಪತ್ನಿಯೇ ದೊರೆತಳೆಂಬಷ್ಟು ಸಂತೋಷಗೊಳ್ಳುತ್ತಾನೆ. ಅಲ್ಲಿಯೇ ಹಲವು ವರ್ಷಗಳ ಕಾಲ ಮಹಾವಿಷ್ಣುವು ನೆಲೆನಿಲ್ಲುತ್ತಾನೆ. ಅಷ್ಟೇ ಅಲ್ಲದೆ ವಿಷ್ಣುವು ಮಹಾಲಕ್ಷ್ಮಿಯನ್ನು ಕುರಿತು ತಪಸ್ಸು ಮಾಡುತ್ತಾನೆ. ಅದೇ ಸಂದರ್ಭದಲ್ಲಿ ಆತನಿಗೊಂದು ಅಶರೀರವಾಣಿಯಾಗಿ ಈ ರೀತಿ ಸೂಚನೆ ನೀಡುತ್ತದೆ: “ಪರಮಾತ್ಮ ನೀನಿರುವ ಸ್ಥಳದಿಂದ ದಕ್ಷಿಣಭಾಗದಲ್ಲಿ ಕೃಷ್ಣವೇಣೀ ಎಂಬ ಪವಿತ್ರ ನದಿಯೊಂದು ಹರಿಯುತ್ತಿದೆ. ಆ ನದಿಯಿಂದ ಇಪ್ಪತ್ತೆರಡು ಯೋಜನಗಳ ಅಂತರದಲ್ಲಿ ಸ್ವರ್ಣಮಯವಾದ ಮತ್ತೊಂದು ನದಿ ಹರಿಯುತ್ತಿದೆ. ಆ ನದಿಯ ಉತ್ತರ ದಿಕ್ಕಿನಲ್ಲಿ ಸ್ವರ್ಗಲೋಕದಲ್ಲಿ ದೊರೆಯುವ ಸಾವಿರದಳಗಳ ತಾವರೆ ಪುಷ್ಪವನ್ನು ತರಿಸಿಕೊಂಡು ಒಂದು ಕೊಳದಲ್ಲಿ ಪ್ರತಿಷ್ಠಾಪಿಸಿ, ಅದರ ಪಕ್ಕದಲ್ಲಿ ಸೂರ್ಯನನ್ನೂ ಪ್ರತಿಷ್ಠಾಪಿಸಿ, ಆ ಪುಷ್ಪವು ಬಾಡದಂತೆ ನೋಡಿಕೊಳ್ಳುತ್ತಾ ಲಕ್ಷ್ಮೀಸ್ತೋತ್ರವನ್ನು ಪಠಿಸಿದರೆ ನಿನ್ನ ಪ್ರಿಯಪತ್ನಿಯು ಒಲಿದು ಬರುವಳು.”

ಪರಮಾತ್ಮನನ್ನು ಆಕಾಶವಾಣಿಯು ಸೂಚಿಸಿದಂತೆ ಮಾಡಲು, ಮಹಾಲಕ್ಷ್ಮಿಗೆ ತನ್ನ ಪತಿಯನ್ನು ಸೇರಲು ಮನಸ್ಸು ಕರಗಲಾರಂಭಿಸುತ್ತದೆ. ಕಪಿಲ ಮಹರ್ಷಿಗಳಲ್ಲಿ ತನ್ನ ಮನಸ್ಥಿತಿಯನ್ನು ಬಿನ್ನೈಸಿಕೊಳ್ಳುತ್ತಾಳೆ. ಅಷ್ಟರಲ್ಲಿ ಬ್ರಹ್ಮದೇವರೂ ಅಲ್ಲಿಗೆ ಬಂದು ಮಹಾಲಕ್ಷ್ಮಿಗೆ ಸಮಾಧಾನಮಾಡಿ, ಮಹಾವಿಷ್ಣುವಿನ ನಡತೆಯಲ್ಲಿ ಆಡಗಿದ್ದ ಧರ್ಮಸೂಕ್ಷ್ಮವನ್ನು ವಿವರಿಸಿ, ಆಕೆಯನ್ನು ತಕ್ಷಣ ತನ್ನ ಪತಿಯೊಂದಿಗೆ ಸೇರಲು ವಿನಂತಿಸಿಕೊಳ್ಳುತ್ತಾರೆ. ಅಂತೆಯೇ ಸಹಸ್ರದಳದ ತಾವರೆಯಲ್ಲಿ “ಉತ್ಠಾನ”ಳಾದ ಮಹಾಲಕ್ಷ್ಮಿಯೊಂದಿಗೆ ತುಳಸೀದೇವಿಯನ್ನು ಪೂಜಿಸುವ ಕಾರಣ ಕಾರ್ಥೀಕಮಾಸಶುಕ್ಲ ದ್ವಾದಶಿಯನ್ನು ಉತ್ಥಾನದ್ವಾದಶಿಯೆಂದು, ತುಳಸೀ ವಿವಾಹವೆಂದು ಪೂಜಿಸಲಾಗುವುದು. ತುಳಸಿಯೊಂದಿಗೆ ನೆಲ್ಲಿ ಟೊಂಗೆಯಿಡುವುದು, ಅದರಲ್ಲಿರುವ ನೆಲ್ಲಿಕಾಯಿಯಲ್ಲಿ ದಾಮೋದರರೂಪೀ ಪರಮಾತ್ಮನ ಸನ್ನಿಧಾನವಿರುತ್ತದೆ. ದಾಮೋದರರೂಪೀ ವಿಷ್ಣುವು ಕಾರ್ತೀಕಮಾಸ ನಿಯಾಮಕ. ದಾಮೋದರನ ಅವತಾರವು ಮಹಾವಿಷ್ಣುವಿನ 24 ಅವತಾರಗಳಲ್ಲೊಂದು ಮತ್ತು ವಿಷ್ಣುಸಹಸ್ರನಾಮದಲ್ಲಿ 40ನೇ ಶ್ಲೋಕದಲ್ಲಿ ದಾಮೋದರನ ಸ್ತೊತ್ರವಿದೆ. ಇಡೀ ಜಗತ್ತನ್ನು ತನ್ನ “ದಾಮ” ಅಥವಾ ಉದರದಲ್ಲಿ ಧರಿಸಿರುವುದ್ರಿಂದಲೇ ಈತನನ್ನು ದಾಮೋದರನೆಂದು ಕರೆಯಲಾಗುತ್ತದೆ. ಕಾರ್ತೀಕ ಮಾಸದಲ್ಲಿ ಸ್ನಾನ ಮಾಡುವಾಗ ಶ್ರೀ ದಾಮೋದರ ಸ್ತೋತ್ರವನ್ನು ಪಠಿಸುವುದು ಪುಣ್ಯಕರ.

ಶ್ರೀ ಕೃಷ್ಣಾರ್ಪಣಮಸ್ತು.        

No comments:

Post a Comment